ಅಥಿ ಐ ಲವ್‌ಯು ಗಂಡ ಹೆಂಡತಿ ನಡುವೆ ಹೊಂದಾಣಿಕೆಯೇ ಜೀವನ -ರೇಟಿಂಗ್ : 3/5 ***
Posted date: 09 Sat, Dec 2023 01:57:21 PM
ನಿರ್ದೇಶನ: ಲೋಕೇಂದ್ರಸೂರ್ಯ
ನಿರ್ಮಾಪಕ : ರೆಡ್ ಅಂಡ್ ವೈಟ್ ಸೆವೆನ್‌ರಾಜ್ 
ಸಂಗೀತ : ಅನಂತ್ ಆರ್ಯನ್ 
ತಾರಾಗಣ : ಲೋಕೇಂದ್ರಸೂರ್ಯ, ಸಾತ್ವಿಕಾ(ಶ್ರಾವ್ಯರಾವ್)
 
ಎಲ್ಲೋ ಹುಟ್ಟಿ ಬೆಳೆದ, ವಿಭಿನ್ನ ಮನಸ್ಥಿತಿಯ ಎರಡು ಜೀವಗಳು ಒಂದಾಗಿ  ಜೀವನ ನಡೆಸುವುದೇ ಸಂಸಾರ. ಈ ಸಂಸಾರವೆಂಬ ರಥಕ್ಕೆ 
ಗಂಡ, ಹೆಂಡತಿ ಎರಡು ಚಕ್ರಗಳಿದ್ದ ಹಾಗೆ. ಇಬ್ಬರಲ್ಲಿ ಯಾರೊಬ್ಬರು ತಪ್ಪುಹಾದಿ ತುಳಿದರೂ ಆ ರಥ ಸಮತೋಲನ  ಕಳೆದುಕೊಳ್ಳುತ್ತದೆ. ಗಂಡ ಹೆಂಡತಿ ನಡುವಿನ ಜಗಳ ಉಂಡು ಮಲಗೋವರೆಗೂ ಅನ್ನೋಹಾಗೆ  4 ಗೋಡೆಗಳ ನಡುವೆ ಅದು ಇತ್ಯರ್ಥವಾಗಬೇಕು. ಅದು ಬೀದಿಗೆ ಬರಬಾರದು ಎಂದು ದಂಪತಿಗಳಿಬ್ಬರ ಬದುಕಿನ ಮೂಲಕ ನಿರ್ದೇಶಕ ಲೋಕೇಂದ್ರ ಸೂರ್ಯ ಪ್ರೇಕ್ಷಕರಿಗೆ  ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ಕಾರಣಗಳಿಗೆ  ಗಂಡ ಹೆಂಡತಿಯರ ನಡುವೆ  ಜಗಳವಾಗಿ ಅದು ವಿಕೋಪಕ್ಕೆ ತಿರುಗಿ ಕೊನೆಗೆ ಡೈವರ್ಸ್ ಹಂತಕ್ಕೂ ಹೋದಂಥ ನೂರಾರು ಉದಾಹರಣೆಗಳು ನಮ್ಮ ಮುಂದಿವೆ, ಅಂಥವರಿಗೆಲ್ಲ ಈ ಚಿತ್ರ ಒಂದು ಮಾರ್ಗದರ್ಶಕವಾಗಲಿದೆ, ಗಂಡ ಹೆಂಡತಿ‌ ನಡುವೆ ಇಗೋ ಯಾವತ್ತೂ ಇರಬಾರದು. ಇಬ್ಬರಲ್ಲಿ ಒಬ್ಬರಾದರೂ ತಗ್ಗಿ ಹೋಗಬೇಕು ಎಂದು  ನಿರ್ದೇಶಕರು ಪರಿಣಾಮಕಾರಿಯಾಗಿ  ತೆರೆಯಮೇಲೆ ತಂದಿದ್ದಾರೆ. ಯಂಗ್‌ಕಪಲ್ ನಡುವೆ ಒಂದೇ ದಿನದಲ್ಲಿ ನಡೆಯುವ ಘಟನೆಗಳ ಮೂಲಕ ದಂಪತಿಗಳಿಗೆ ಸುಂದರ ಮೆಸೇಜೊಂದನ್ನು ನೀಡಿದ್ದಾರೆ, ವಸಂತ್(ಲೋಕೇಂದ್ರಸೂರ್ಯ) ಹಾಗೂ ಅಥಿರಾ(ಸಾತ್ವಿಕಾ) ದಂಪತಿಗಳಾಗಿ ನಾಲ್ಕು ವರ್ಷಗಳವರೆಗೆ ವೈವಾಹಿಕಜೀವನ ನಡೆಸಿದರೂ, ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳದೆ  ಸಣ್ಣಪುಟ್ಟ ವಿಚಾರಗಳಿಗೂ ಕೋಪಗೊಳ್ಳುವುದು ನಡೆದಿರುತ್ತದೆ, ಅಥಿರ ಇಲ್ಲಿ ಮಗುವಿನಂಥ ಮನಸಿನವಳು, ಬೆಳಿಗ್ಗೆ ಗಂಡ ಆಪೀಸ್‌ಗೆ ಹೋಗುವ ವೇಳೆಗೆ ತಿಂಡಿ ರೆಡಿ ಮಾಡಿಕೊಡಬೇಕು ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲದಂಥ ಮುಗ್ಧೆ.  ಆಕೆಯ ಮಗುವಿನಂಥ‌ ಮನಸನ್ನು  ಅರಿತ ವಸಂತ್ ಹೇಗೆ ಆಕೆಯ ಕೋಪ ಶಮನ ಮಾಡಿ ಆಕೆಯ ಮನಗೆದ್ದ ಎನ್ನುವುದೇ ಅಥಿ ಐ ಲವ್ ಯು ಚಿತ್ರದ ಸಾರಾಂಶ.   
 
ಇಲ್ಲಿ ಅಥಿರಾ  ತಾಯಿ ಕಾಲ್ ಮಾಡಿ ಮಗಳಿಗೆ  ಬುದ್ದಿಮಾತು ಹೇಳದೆ ಮತ್ತಷ್ಟು ತಲೆಕೆಡಿಸುತ್ತಾಳೆ. ಇದರ ನಡುವೆ ಮತ್ತೊಬ್ಬ ಗೆಳತಿ ತನ್ನ ಬದುಕಿನ ನೋವಿನ ಕಹಿ ಅನುಭವಗಳನ್ನು ತಿಳಿಸುತ್ತಾಳೆ. ಗಂಡ ಬೈದನೆಂಬ ಕಾರಣಕ್ಕೆ ತಾಯಿ ಮಾತು ಕೇಳಿ ಅಥಿರಾ ತವರುಮನೆಗೆ ಹೊರಟುನಿಲ್ಲುತ್ತಾಳೆ. ಹೀಗೆ ಹಲವಾರು ಘಟನೆಗಳ ಮೂಲಕ ಗಂಡ ಹೆಂಡತಿ ಎಂದರೆ ಹೇಗಿರಬೇಕು ಎಂದು ತೋರಿಸಿಕೊಟ್ಟಿದ್ದಾರೆ. ಯುವದಂಪತಿ ತಿಳಿದುಕೊಳ್ಳಬೇಕಾದ ಸಾಕಷ್ಟು ವಿಚಾರಗಳು ಈ ಚಿತ್ರದಲ್ಲಿದ್ದು, ಸಂಸಾರದಲ್ಲಿ ತನ್ನದೇ ನಡೆಯಬೇಕು ಎನ್ನುವ ಮನಸ್ಥಿತಿಯವರು ಅವಶ್ಯವಾಗಿ  ಈ ಚಿತ್ರವನ್ನು ನೋಡಲೇಬೇಕು. ಇಡೀ ಚಿತ್ರದಲ್ಲಿ ಕೇವಲ ಎರಡೇ ಪಾತ್ರಗಳಿದ್ದು, ಆ ಮೂಲಕ ನೂರು ನಿಮಿಷಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ನಿರ್ದೇಶಕ ಲೋಕೇಂದ್ರ ಸೂರ್ಯ ಯಶಸ್ವಿಯಾಗಿದ್ದಾರೆ. 
 
ಗಂಡ ಹೆಂಡತಿಯ ಬದುಕಿನಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಎದುರಾಗುವ ಸಮಸ್ಯೆಗಳು, ಅದಕ್ಕೆ ದಾರಿಮಾಡುವ ವ್ಯಕ್ತಿಗಳು, ಪರಿಹಾರ ತೋರಿಸುವ ಗುರುಗಳ ಮಾತು, ಇದನ್ನೆಲ್ಲ ಹಿನ್ನೆಲೆ ಧ್ವನಿಯ ಮೂಲಕ ತೋರಿಸಿರುವ ರೀತಿ ಗಮನ ಸೆಳೆಯುತ್ತದೆ. ನಿರ್ದೇಶನದ ಜೊತೆ ನಾಯಕನಾಗೂ ಲೋಕೇಂದ್ರಸೂರ್ಯ  ಜೀವ ತುಂಬಿ ಅಭಿನಯಿಸಿದ್ದಾರೆ. ನಾಯಕಿ ಅಥಿ ಪಾತ್ರದಲ್ಲಿ ಸಾತ್ವಿಕಾ(ಶ್ರಾವ್ಯರಾವ್) ಕೂಡ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹಾಗೆಯೇ ನಿರ್ಮಾಪಕ ರೆಡ್ ಅಂಡ್ ವೈಟ್ ಸೆವೆನ್‌ರಾಜ್ ನೆರೆಹೊರೆಯ ವ್ಯಕ್ತಿಯಾಗಿ ತಮ್ಮದೇ ಪಾತ್ರಕ್ಕೆ ಧ್ವನಿ ನೀಡಿರುವುದು ಗಮನ ಸೆಳೆಯುತ್ತದೆ. ಅನಂತ್‌ಆರ್ಯನ್ ಅವರ ಹಿನ್ನೆಲೆ ಸಂಗೀತದ ಜೊತೆಗೆ  ಅಚ್ಚುಕಟ್ಟಾದ ಛಾಯಾಗ್ರಹಣ ಚಿತ್ರಕ್ಕೆ  ಹೊಸ ರೂಪವನ್ನೇ ನೀಡಿದೆ. ಸಂಸಾರದಲ್ಲಿ ಗಂಡ-ಹೆಂಡತಿ  ಪ್ರೀತಿಯಿಂದ ಜೀವನ ನಡೆಸುವುದು ಎಷ್ಟು ಮುಖ್ಯ ಎಂಬುದನ್ನು ಈ ಚಿತ್ರ ಹೇಳುತ್ತದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed